ಉಡುಪಿ, ನ.3 :ಎ.ಸಿ. ರಿಪೇರಿ ಮಾಡಲು ಬ್ಯಾಂಕಿಗೆ ಹೋಗುವವನು ಕಳ್ಳನೂ ಆಗಿದ್ದರೆ ಏನಾಗುತ್ತದೆ?
ಬ್ಯಾಂಕ್ ಲೂಟಿಯಾಗುತ್ತದೆ.
ಆದರೆ, ಕಳ್ಳರ ಕಳ್ಳ ಕೃಷ್ಣನ ಊರಾದ ಉಡುಪಿಯಲ್ಲಿ ಹಾಗಾಗಿಲ್ಲ. ಬ್ಯಾಂಕಿನ ಎ.ಸಿ. ರಿಪೇರಿ ಮಾಡಲು ಹೋಗಿದ್ದ ಖದೀಮನೊಬ್ಬ ಹಣ ಬಾಚಿಕೊಂಡ ನಂತರ ಬ್ಯಾಂಕಿನಿಂದ ಹೊರ ಹೋಗಲಾಗದೆ ಸಿಕ್ಕಿಬಿದ್ದಿದ್ದಾನೆ. ಕಾರಣ- ಅವನನ್ನು ಒಳಗೇ ಬಿಟ್ಟು ಬ್ಯಾಂಕ್ ಸಿಬ್ಬಂದಿ ಬಾಗಿಲು ಮುಚ್ಚಿಕೊಂಡು ಮನೆಗೆ ಹೋಗಿದ್ದು! ಇಡೀ ರಾತ್ರಿ ಬ್ಯಾಂಕಿನಲ್ಲೇ ಕಾಲಹರಣ ಮಾಡಿದ ಕಳ್ಳ ಮರುದಿನ ಬೆಳಗ್ಗೆ ನೌಕರರು ಬಂದು ಬಾಗಿಲು ತೆಗೆದಾಗ ದುಡ್ಡಿನ ಗಂಟಿನೊಂದಿಗೆ ಸೆರೆ ಸಿಕ್ಕಿದ್ದಾನೆ. ಈ ಘಟನೆ ನಡೆದಿದ್ದು ಕವಿ ಮುದ್ದಣ ಮಾರ್ಗದಲ್ಲಿರುವ ವಿಜಯಾ ಬ್ಯಾಂಕಿನ ವಲಯ ಕಚೇರಿಯಲ್ಲಿ. ಕಳವಿಗೆ ಯತ್ನಿಸಿ ಸಿಕ್ಕಿಬಿದ್ದವನು ಹೃಷಿಕೇಶ (35). ಈತ ಉಡುಪಿಯ ಅಂಬಲಪಾಡಿ ಗ್ರಾಮದ ನಿವಾಸಿ.
ಹೃಷಿಕೇಶ ೩ ದಿನದಿಂದ ಬ್ಯಾಂಕಿನ ಏರ್‌ಕೂಲರ್ ರಿಪೇರಿ ಮಾಡುವ ನೆಪದಲ್ಲಿ ಬಂದು ಹೋಗಿ ಮಾಡುತ್ತಿದ್ದ. ಆದರೆ, ಸೋಮವಾರ ಬಂದವನು ಸೀದಾ ಬ್ಯಾಂಕಿನ ಸ್ಟ್ರಾಂಗ್ ರೂಮಿಗೆ ನುಗ್ಗಿದ. ಅವನ ಕೈಯಲ್ಲಿ ಆ ಕೋಣೆಯ ನಕಲಿ ಕೀಲಿಯಿತ್ತು. ನಂತರ ಕಪಾಟಿನಿಂದ ೧.೯ ಲಕ್ಷ ರು. ಬಾಚಿಕೊಂಡು, ಹೆಗಲಿಗೆ ಬ್ಯಾಗ್ ನೇತು ಹಾಕಿಕೊಂಡು ಬಾಗಿಲಿಗೆ ಬಂದು ನೋಡುತ್ತಾನೆ, ಅದು ಮುಚ್ಚಿದೆ.
ಬ್ಯಾಂಕಿನ ಅವಧಿ ಮುಗಿದಿದ್ದರಿಂದ ಮುಖ್ಯ ದ್ವಾರಕ್ಕೆ ಬೀಗ ಹಾಕಿ ನೌಕರರು ಮನೆಗೆ ತೆರಳಿದ್ದರು. ಬ್ಯಾಂಕಿನ ಸ್ಟ್ರಾಂಗ್ ರೂಮಿಗೇ ಕನ್ನ ಹಾಕಿದ ಖದೀಮ ಅನಿವಾರ್ಯವಾಗಿ ಬ್ಯಾಂಕಿನ ಹೊರ ಬಾಗಿಲು ತೆರೆಯಲಾಗದೆ ಅಲ್ಲೇ ಉಳಿಯಬೇಕಾಯಿತು.
ಬೆಳಗ್ಗೆ ಕಾದಿತ್ತು ಮಾರಿಹಬ್ಬ: ಮಂಗಳವಾರ ಬೆಳಗ್ಗೆ ನೌಕರರು ಬಂದು ಬಾಗಿಲು ತೆರೆದರು. ಒಳಗೆ ಕಾದು ನಿಂತಿದ್ದ ಹೃಷಿಕೇಶ ತಕ್ಷಣ ಅಲ್ಲಿಂದ ಓಟಕಿತ್ತ. ಬ್ಯಾಂಕ್ ಸಿಬ್ಬಂದಿ ಅವನನ್ನು ಬೆನ್ನತ್ತಿ ಹಿಡಿದರು. ತಾವೇ ಸ್ವಲ್ಪ ಕಾಲ ವಿಚಾರಣೆ ನಡೆಸಿ ಪೊಲೀಸರಿಗೊಪ್ಪಿಸಿದರು. ಆಗ ಹೃಷಿಕೇಶನ ಬಣ್ಣ ಬಯಲಾಯಿತು. ಸೋಮವಾರ ಸಂಜೆ ತಾನು ತಪ್ಪಿಸಿಕೊಳ್ಳಲು ಅನುಕೂಲವಾಗಲೆಂಬಂತೆ ಲಾಕರ್‌ರೂಮಿನ ಟ್ಯೂಬ್‌ಲೈಟ್ ಸಂಪರ್ಕವನ್ನೂ ಹೃಷಿಕೇಶ ಕಡಿದು ಹಾಕಿದ್ದ.
ಸೈರನ್ ಮೊಳಗಲಿಲ್ಲವೇ?: ಬ್ಯಾಂಕಿನ ಸೇಫ್ ಲಾಕರನ್ನು ತೆರೆಯುವಾಗ ಸೈರನ್ ಮೊಳಗಲಿಲ್ಲವೇಕೆ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸರು, ಸೈರನ್ ಹಳೆಯದಾಗಿದ್ದರಿಂದ ಅದು ಮೊಳಗಲಿಲ್ಲ ಎಂದು ತಿಳಿಸಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೌಜನ್ಯ: ಕನ್ನಡಪ್ರಭ,